ಕನ್ನಡ

ಭಾಷೆ

ಮಗು ಶಾಲೆಗೆ ಬರುವ ಮೊದಲು ಶೇಕಡ 80 ರಷ್ಟು ಸಂಕೀರ್ಣ ಭಾಷಾ ಸಾಮರ್ಥ್ಯವನ್ನು ಹೊಂದಿ ಶಾಲಾ ಶಿಕ್ಷಣವನ್ನು ಪ್ರವೇಶಿಸಿಸುತ್ತದೆ ಎಂಬುದು ಶಿಕ್ಷಣ ತಜ್ಞರೆಲ್ಲರ ಒಮ್ಮತ ಅಭಿಪ್ರಾಯ. ಆದರೆ 4ನೇ ತರಗತಿಗೆ ಬರುವ ಹೊತ್ತಿಗೆ ಬಹುತೇಕ ಮಕ್ಕಳು ಓದು ಮತ್ತು ಬರಹದ ಕಲಿಕೆಯಲ್ಲಿ ಹಿಂದುಳಿಯುತ್ತಾರೆ ಎಂಬ ವಿಷಯವನ್ನು ವರದಿಗಳು ನಿರಂತರವಾಗಿ ಹೇಳುತ್ತಿವೆ. ಇದಕ್ಕೆ ಕಾರಣಗಳೇನು? ಮಗುವಿನ ಭಾಷೆಯಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದಾದರೇ ಸುಗಮಕಾರಿಕೆಯಲ್ಲಿ ಏನೋ ವ್ಯತ್ಯಾಸವಿದೆ ಎಂದಾಯಿತಲ್ಲವೆ? ಇದಕ್ಕೆ ಪರಿಹಾರ ಹುಡುಕಿ ಹೊರಟರೆ ಭಾಷಾ ಕಲಿಕೆಯನ್ನು ಸುಗಮೀಕರಿಸುವವರಲ್ಲಿ ಭಾಷೆಯ ಕೆಲವು ಮೂಲಭೂತ ವಿಷಯಗಳು ಹಾಗೂ ಅದನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳುವಲ್ಲಿನ ಕೊರತೆ ಕಂಡುಬರುತ್ತಿದೆ. ಈ ಕಾರಣಕ್ಕಾಗಿ ಭಾಷೆ ಕೇವಲ ಸಂವಹನಕ್ಕಾಗಿ ಮಾತ್ರ ಎಂಬ ಸೀಮಿತ ಅಲೋಚನೆಯಿಂದ ಹೊರಬಂದು ಅದು ಅಲೋಚನೆಯ ಸಾಧನ, ವ್ಯಕ್ತಿತ್ವ ನಿರೂಪಣೆಯ ಸಾಧನ ಹಾಗೂ ಇತರ ಎಲ್ಲಾ ಕಲಿಕೆಯ ಮೂಲ ಎಂಬ ಸಂಕೀರ್ಣ ವಿಷಯವನ್ನು ಅರ್ಥ ಮಾಡಿಕೊಳ್ಳುವಲ್ಲಿ “ಭಾಷೆ” ಮಾಡ್ಯೂಲ್ ಅನುಭವಗಳನ್ನು ಒದಗಿಸುತ್ತದೆ. ಈ ಶೀರ್ಷಿಕೆಯಡಿಯಲ್ಲಿ ನಾವು ಈ ಕೆಳಕಂಡ ವಿಚಾರಗಳನ್ನು ಚರ್ಚಿಸುತ್ತೇವೆ.

ಭಾಷೆ ಎಂದರೇನು? ಭಾಷೆ ಉಗಮ ಮತ್ತು ವಿಕಾಸ, ಭಾಷೆ ಮತ್ತು ಸಮಾಜ, ಭಾಷೆ ಮತ್ತು ಮೆದುಳು, ಭಾಷೆ ಮತ್ತು ಅಲೋಚನೆ. DOWNLOAD


thumbnail

thumbnail

ಕನ್ನಡ

ಭಾಷೆ ಸ್ವರೂಪ ಮತ್ತು ಸಂರಚನೆ

ಭಾಷೆಯು ಮಗುವಿನ ಜೀವನದ ಜೀವದ್ರವ್ಯವಾಗಬೇಕು. ಈ ನೆಲೆಯಲ್ಲಿ ಶಿಕ್ಷಕರು ಭಾಷೆಯ ಒಟ್ಟಾರೆ ಆಯಾಮಗಳನ್ನು ಅರ್ಥಮಾಡಿಕೊಳ್ಳುವುದು. ಭಾಷೆ ಎಂದಾಗ ಮಗುವಿನ ಕಲಿಕೆಯಲ್ಲಿ ಅದರ ಪಾತ್ರವನ್ನು ಗಮನಿಸಿ ಭಾಷೆಯ ಸ್ವರೂಪ ಮತ್ತು ಸಂರಚನೆ ಪ್ರಕ್ರಿಯೆಗಳನ್ನು ತಿಳಿಯುವುದು ಮುಖ್ಯವಾಗುತ್ತದೆ. ಹಾಗೆಯೇ ತರಗತಿ ಪ್ರಕ್ರಿಯೆಯಲ್ಲಿ ಮಗು ಭಾಷೆ ಕಟ್ಟಿಕೊಳ್ಳುವ ಪ್ರಕ್ರಿಯೆಯಲ್ಲಿ ಶಾಲೆಯ ಹೊರಗಿನ ಪ್ರಭಾವಗಳನ್ನು ಭಾಷೆಯ ಸ್ವರೂಪದ ಹಿನ್ನೆಲೆಯಲ್ಲಿ ಅರಿಯಬೇಕಾಗುತ್ತದೆ. ಈ ನೆಲೆಗಳಲ್ಲಿ ಮಗುವಿನ ಆಲೋಚನೆಗಳು ಮತ್ತು ಕಲ್ಪನೆಗಳು ಹೇಗೆ ಹುಟ್ಟುತ್ತವೆ? ಮತ್ತು ಆ ಆಲೋಚನೆಗಳು ಮಗುವಿನ ಭಾಷಾ ಸಮೃದ್ಧಿಗೆ ಹೇಗೆ ಸಹಾಯ ಮಾಡುತ್ತವೆ? ಹಾಗೆಯೇ ತಮ್ಮ ತರಗತಿ ಪ್ರಕ್ರಿಯೆಗಳಲ್ಲಿ ಮಕ್ಕಳಿಗೆ ಕೊಡುವ ಅವಕಾಶಗಳು ಹೇಗಿರಬೇಕಾಗುತ್ತವೆ? ಎಂಬುದನ್ನು ಶಿಕ್ಷಕರು ಮನವರಿಕೆ ಮಾಡಿಕೊಳ್ಳುವುದು ಈ ಮಾಡ್ಯೂಲ್ ನ ಆಶಯವಾಗಿದೆ. DOWNLOAD


thumbnail

thumbnail

ಕನ್ನಡ

ಭಾಷಾ ಗಳಿಕೆ ಮತ್ತು ಭಾಷಾ ಕಲಿಕೆ

ಮಗು ಶಾಲೆಗೆ ಬರುವ ಪೂರ್ವದಲ್ಲಿಯೇ ಅಸಾಧಾರಣವಾದ ಶ್ರವಣ ಸಾಮರ್ಥ್ಯವನ್ನು ತೋರುವ, ಸನ್ನಿವೇಶಕ್ಕೆ ತಕ್ಕಂತೆ ವರ್ತಿಸುವ, ತನ್ನ ಅಭೀಷ್ಟಗಳನ್ನು ಈಡೇರಿಸಿಕೊಳ್ಳಲು ಸಹಜ ಸಂವಹನ ಮಾಡುವ, ವ್ಯಾಕರಣಬದ್ಧವಾಗಿ ಮಾತನಾಡುವ ಭಾಷಿಕ ಸಾಮರ್ಥ್ಯಗಳನ್ನು ಅನೌಪಚಾರಿಕವಾಗಿಯೇ ಗಳಿಸಿರುತ್ತದೆ. ಇಷ್ಟೆಲ್ಲಾ ಭಾಷಾ ಸಂಪತ್ತನ್ನು ಗಳಿಸಿರುವ ಮಗು ಪುನಃ ಭಾಷೆಯನ್ನು ಶಾಲೆಯಲ್ಲಿ ಕಲಿಯುವ ಅಗತ್ಯವಿದೆಯೇ?. ಮಗು ಭಾಷೆಯನ್ನು ಸಹಜವಾಗಿ ಕಲಿಯುವಂತೆ ಮಾಡುವುದು ಹೇಗೆ? ಭಾಷೆಯನ್ನು ಸ್ವಾಭಾವಿಕವಾಗಿ ಕಲಿಯುವಂತೆ ಮಗುವಿಗೆ ಪ್ರೇರಣೆ ನೀಡುವುದು ಹೇಗೆ? ಮುಂದುವರಿದು ಭಾಷಾಕಲಿಕೆಯು ಸ್ವಾಭಾವಿಕವೇ? ಅಥವಾ ಅನುಕೂಲಿಸುವಂತದ್ದೇ? ಎನ್ನುವುದನ್ನೂ ಕೂಡ ಭಿನ್ನ ನೆಲೆಗಳಲ್ಲಿ ಅರ್ಥೈಸುವ ಪ್ರಯತ್ನ ಮಾಡುತ್ತಾ, ಇವೆರೆಡರ ನಡುವಿರುವ ಅನ್ಯೋನ್ಯತೆಯನ್ನು ಕಂಡುಕೊಳ್ಳಲು ಈ ಮಾಡ್ಯೂಲ್ ನಲ್ಲಿ ಯತ್ನಿಸಲಾಗಿದೆ. ಶಿಕ್ಷಕ ತನ್ನ ಅನುಭವಗಳನ್ನು ಇಂದೀಕರಣಗೊಳಿಸುತ್ತಾ (Update) ಮಗುವಿನ ವ್ಯಕ್ತಿತ್ವದೊಂದಿಗೆ ಭಾಷೆಯನ್ನು ಅರ್ಥಪೂರ್ಣವಾಗಿ ಬೆಸೆಯುವಲ್ಲಿ ಭಾಷಾ ಸುಗಮಕಾರರ ಪಾತ್ರ ಮತ್ತು ಜವಾಬ್ದಾರಿಗಳನ್ನು ನೆನಪಿಸುವ, ಜಾಗೃತಗೊಳಿಸುವ ಕಾರ್ಯವೂ ಇಲ್ಲಿದೆ. DOWNLOAD


thumbnail

thumbnail

ಕನ್ನಡ

ಭಾಷಾ ಕೌಶಲಗಳು

ಭಾಷಾ ಕಲಿಕೆಯೆಂಬುದು ಭಾಷಾ ಕೌಶಲಗಳ ಕಲಿಕೆ ಆಗಿದೆಯೇ?. ಭಾಷಾ ಪ್ರಬುದ್ಧತೆ ಸಿದ್ಧಿಸುವುದು ಭಾಷಾ ಕೌಶಲಗಳು ಮತ್ತು ಭಾಷಾಂಶಗಳ ಪರಿಣತಿಯಿಂದ ಮಾತ್ರ. ಶಿಕ್ಷಕರು ಭಾಷೆಯನ್ನು ಆಕರ್ಷಕ ಮತ್ತು ಪರಿಣಾಮಕಾರಿಯಾಗಿ ಕಲಿಸುವಲ್ಲಿ ಭಾಷಾ ಕೌಶಲಗಳ ಬಹುಮುಖಿ ಪಾತ್ರಗಳನ್ನು ಈ ಮಾಡ್ಯೂಲ್ ವಿಷದೀಕರಿಸುತ್ತದೆ. ಭಾಷಾ ಕೌಶಲಗಳ ವ್ಯವಸ್ಥಿತ ಬಳಕೆಯೊಂದಿಗೆ ಭಾಷೆಯನ್ನು ತರಗತಿಗಳಲ್ಲಿ ಆಕರ್ಷಕವಾಗಿ ಅನುಕೂಲಿಸಲು, ವಿದ್ಯಾರ್ಥಿಗಳಲ್ಲಿ ಹುದುಗಿರುವ ಸೃಜನಶೀಲ ಸಾಮರ್ಥ್ಯಗಳನ್ನು ಹೊರತರಲು ಹಾಗೂ ಭಾಷಿಕ ಸಾಮರ್ಥ್ಯಗಳ ವಿಕಾಸದಲ್ಲಿ ಭಾಷಾ ಕೌಶಲಗಳ ಪಾತ್ರವನ್ನು ಗ್ರಹಿಸುವುದಕ್ಕೆ ಈ ಮಾಡ್ಯೂಲ್ ನೇಹಿಗನಂತೆ ನೆರವಾಗುತ್ತದೆ. ಹಾಗೆಯೇ ಕಲಿಕೆಯ ಪ್ರಕ್ರಿಯೆಯು ಚೇತೋಹಾರಿಯಾಗುವಂತೆ ನಾವೀನ್ಯಯುತವಾದ ತಂತ್ರಗಳನ್ನು ಅಳವಡಿಸಲು ಮಾರ್ಗೋಪಾಯಗಳನ್ನು ಅರಿಯುವುದಕ್ಕೆ ಇದು ದಿಕ್ಸೂಚಿಯಾಗುತ್ತದೆ. ಕಲಿಕಾ ಪ್ರಕ್ರಿಯೆಯು ವಿದ್ಯಾರ್ಥಿಗಳ ಸಕ್ರಿಯ ಸಹಭಾಗಿತ್ವಕ್ಕೆ ಆದ್ಯತೆ ನೀಡಿ ಅವರಲ್ಲಿ ಅಂತಸ್ಥವಾಗಿರುವ ಭಾಷಾ ಕೌಶಲಗಳ ಸಾಮರ್ಥ್ಯವನ್ನು ಸಂವರ್ಧಿಸುತ್ತಾ, ಆವಿಷ್ಕಾರಶೀಲ ಭಾಷಾ ಬೋಧನೆಗೆ ಭಾಷಾ ಕೌಶಲಗಳ ಪರಿಣತಿಯೇ ಪ್ರಧಾನವೆಂಬುದನ್ನು ಮನಗಾಣಿಸುವುದೇ ಈ ಮಾಡ್ಯೂಲ್ ನ ಜೀವಾಳ. DOWNLOAD


thumbnail

thumbnail

ಕನ್ನಡ

ವ್ಯಾಕರಣ ಕಲಿಕೆಯಲ್ಲಿ ಪರ್ಯಾಯ ದೃಷ್ಟಿಕೋನ

ಭಾಷಾ ಕಲಿಕೆಗೆ ವ್ಯಾಕರಣದ ಅಗತ್ಯವಿದೆಯೇ? ಯಾವ ರೀತಿಯ ವ್ಯಾಕರಣ ಭಾಷೆಯನ್ನು ಸಮರ್ಥವಾಗಿ ಬಳಸಲು ಸಹಕರಿಸುತ್ತದೆ? ಯಾವ ತರಗತಿಯಲ್ಲಿ ವ್ಯಾಕರಣದ ಯಾವ ಭಾಗವನ್ನು ಮಗು ಕಲಿಯಲು ಸಮರ್ಥ? ಈಗ ನಾವು ವ್ಯಾಕರಣ ಕಲಿಸುತ್ತಿರುವ ವಿಧಾನಗಳು ಸಮಗ್ರ ಭಾಷಾ ಕಲಿಕೆಯ (Whole Language Approach)ಹಿನ್ನೆಲೆಗೆ ನಿಜವಾಗಿ ಸಹಕರಿಸುತ್ತಿವೆಯೇ? ಪ್ರಸ್ತುತ ನಮ್ಮ ಕಲಿಕೆಯು ಸಂಪೂರ್ಣವಾಗಿ ಸಾಂಪ್ರದಾಯಿಕ ವಿಧಾನವನ್ನೇ ಆಧರಿಸಿದೆ. ಈ ಮಿತಿಗಳನ್ನು ನಿವಾರಿಸಲು ಭಾಷಾ ಬಳಕೆಯನ್ನು ಆಧರಿಸಿ ಸಾಂದರ್ಭಿಕ ನೆಲೆಯಲ್ಲಿ ವ್ಯಾಕರಣವನ್ನು ಅನುಕೂಲಿಸುವ ವಿಧಾನಗಳು ಜಾರಿಗೆ ಬರಬೇಕಿದೆ. ವ್ಯಾಕರಣ ಕಲಿಕೆ ಮಗುವಿನ ಭಾಷಾ ಬೆಳವಣಿಗೆಗೆ ಪೂರಕವಾಗಿ ಭವಿಷ್ಯದ ಬದುಕನ್ನು ಭಾಷೆಯ ಮೂಲಕ ಕಟ್ಟಿಕೊಳ್ಳಲು ನೆರವಾಗಬೇಕಾಗುತ್ತದೆ. ಇಲ್ಲದಿದ್ದರೆ ‘ವ್ಯಾಕರಣಂ ಕಲಿತು ಮರೆಯಲ್ಕೆ’ ಎಂಬ ಉಕ್ತಿಗೆ ಪೂರಕವಾಗಿ ನಿಲ್ಲುತ್ತದೆ. ಈ ನೆಲೆಯಲ್ಲಿ ನಾವೆಲ್ಲ ಯೋಚಿಸಬೇಕಿದೆ. DOWNLOAD


thumbnail

thumbnail

ಕನ್ನಡ

ವ್ಯಾಕರಣ - ಸಾಂದರ್ಭಿಕ ನೆಲೆಯಲ್ಲಿ ಲಿಂಗ,ವಚನ,ವಿಭಕ್ತಿ

ಶಾಲೆಯಲ್ಲಿ ವಿದ್ಯಾರ್ಥಿಗಳು, ‘ವ್ಯಾಕರಣವನ್ನು ನಾವೇಕೆ ಕಲಿಯಬೇಕು ? ಕಲಿಯುವುದರಿಂದ ಏನು ಉಪಯೋಗ ?’ ಎಂದು ಪ್ರಶ್ನಿಸಿದರು ಎಂದಿಟ್ಟುಕೊಳ್ಳೋಣ. ಇದು ನಾವು ಕಲಿಸುತ್ತಿರುವ ಇಡೀ ವ್ಯಾಕರಣ ಕಲಿಕೆಯ ತಾರ್ಕಿಕತೆಯನ್ನು ಪ್ರಶ್ನಿಸಿದಂತೆಯೇ. ಈ ಪ್ರಶ್ನೆಗೆ ತಾರ್ಕಿಕವಾಗಿ ಉತ್ತರಿಸುವ ಜವಾಬ್ದಾರಿ ನಮ್ಮದೇ. ಪ್ರಸ್ತುತ ದಿನಗಳಲ್ಲಿ ಭಾಷಾ ಶಿಕ್ಷಣವನ್ನು ಗಮನಿಸಿದಾಗ ಪ್ರಯೋಗಾತ್ಮಕ ದೃಷ್ಟಿ ಹೆಚ್ಚುತ್ತಿದೆ. ಹೀಗಾಗಿ ತರಗತಿಯ ಪ್ರತಿ ಕಲಿಕೆಯಲ್ಲೂ, ಈ ವಿಷಯವನ್ನು ನಾನೇಕೆ ಕಲಿಸುತ್ತಿರುವೆ? ಮಕ್ಕಳ ದೈನಂದಿನ ಬದುಕಿಗೆ ಇದು ಹೇಗೆ ಸಹಕಾರಿಯಾಗಿದೆ? ಎಂಬುದನ್ನು ಪದೇ ಪದೇ ಪ್ರಶ್ನಿಸಿಕೊಳ್ಳುವಂತಾಗಿದೆ. ಭಾಷಾ ಕಲಿಕೆಯಲ್ಲಿ ವ್ಯಾಕರಣ ಹೇಗೆ ಸಹಕರಿಸುತ್ತದೆ?, ನಾವು ಈಗ ವ್ಯಾಕರಣ ಕಲಿಸುತ್ತಿರುವ ವಿಧಾನ ನಿಜವಾಗಿಯೂ ಭಾಷಾ ಕಲಿಕೆಯನ್ನು ಉನ್ನತೀಕರಿಸಲು ಸಹಕರಿಸುತ್ತದೆಯೇ?, ಈಗಿನ ಭಾಷಾ ಕಲಿಕೆಯಲ್ಲಿ ವ್ಯಾಕರಣಕ್ಕೆ ಇರುವ ಸ್ಥಾನಮಾನ ಏನು? ಈ ಪ್ರಶ್ನೆಗಳು “ವ್ಯಾಕರಣ ಕಲಿಕೆ”ಗೆ ಸಂಬಂಧಿಸಿದಂತೆ ಅವ್ಯಾಹತವಾಗಿ ಕೇಳಿಬರುತ್ತಿವೆ. ಶಾಲೆಗೆ ಬರುವ ಪ್ರತೀ ಮಗುವಿನ ಭಾಷೆಯಲ್ಲಿ ಸಂಕೀರ್ಣ ವ್ಯಾಕರಣ ವ್ಯವಸ್ಥೆ ಸಹಜವಾಗಿಯೇ ಸಮ್ಮಿಳಿತಗೊಂಡಿರುತ್ತದೆ. ಮಗು ಶಾಲೆಗೆ ಬಂದಾಗ ಈಗಾಗಲೇ ಸಹಜವಾಗಿ ಕಲಿತ ವಿಚಾರಕ್ಕೆ ಪುಷ್ಟಿ ಸಿಗಬೇಕಿದೆ. ಇದನ್ನು ಬಳಸಿಕೊಂಡು ಉನ್ನತ ಕೌಶಲಗಳನ್ನೂ ಕಲಿಸಬೇಕಿದೆ. ನಾವು ಯಾವ ವ್ಯಾಕರಣಾಂಶವನ್ನು ಯಾವ ವಿಧಾನದಲ್ಲಿ ಕಲಿಸಿದರೆ ಮಗುವಿಗೆ ಉನ್ನತ ಭಾಷಾ ಕೌಶಲಗಳನ್ನು ರೂಢಿಸಿಕೊಳ್ಳಲು ಸಹಕಾರಿಯಾಗುತ್ತದೆ? ಭಾಷೆಯಲ್ಲಿ ವ್ಯಾಕರಣ ಹೇಗೆ ಸಮ್ಮಿಳಿತಗೊಂಡಿದೆ? ಭಾಷೆಯ ಮೂಲ ವ್ಯವಸ್ಥೆಯ (ವರ್ಣ, ಲಿಪಿ) ಪರಿಕಲ್ಪನೆಗಳು ಯಾವುವು? ಮಗುವಿನ ಸಹಜ ಭಾಷೆಯಲ್ಲಿರುವ ವ್ಯಾಕರಣವನ್ನು ಗುರುತಿಸುವುದು ಹೇಗೆ? ಆಯ್ದ (ಲಿಂಗ, ವಚನ, ವಿಭಕ್ತಿ) ವ್ಯಾಕರಣ ಪರಿಕಲ್ಪನೆಗಳನ್ನು ಸಾಂದರ್ಭಿಕರಿಸಿ ಕಲಿಕೆಯನ್ನು ಅನುಕೂಲಿಸುವ ಬಗೆ ಹೇಗೆ? ಎಂಬುದನ್ನು ಈ ಮಾಡ್ಯೂಲ್‍ನಲ್ಲಿ (ಸಂಚಿ) ಚರ್ಚಿಸಿ, ಚಿಂತನಶೀಲತೆಗೆ ಪ್ರೇರೇಪಿಸುತ್ತದೆ. DOWNLOAD


ಕನ್ನಡ

ಹಳೆಗನ್ನಡ ಮತ್ತು ನಡುಗನ್ನಡ ಪಠ್ಯಕಲಿಕೆ

ಕನ್ನಡ ಭಾಷೆಯು ಎರಡು ಸಾವಿರ ವರ್ಷಗಳಿಗೂ ಹೆಚ್ಚು ಇತಿಹಾಸವನ್ನು ಹೊಂದಿದೆ. ಸಮೃದ್ಧ ಇತಿಹಾಸ ಹೊಂದಿರುವ ಇಂತಹ ಭಾಷೆ ಮತ್ತು ಸಾಹಿತ್ಯವು ಇದ್ದಕ್ಕಿದ್ದ ಹಾಗೆಯೇ ರೂಪುಗೊಂಡಿದ್ದಲ್ಲ. ಹಲವು ಶತಮಾನಗಳ ಸ್ಥಿತ್ಯಂತರಗಳು ಭಾಷೆಯ ಆಂತರಿಕ ಬದಲಾವಣೆಗಳಿಗೆ ಕಾರಣವಾಗಿವೆ. ಕನ್ನಡ ಭಾಷೆಯ ಸ್ವರೂಪವನ್ನು ಅರಿತುಕೊಳ್ಳಬೇಕಾದರೆ ಮೊದಲು ಆಯಾ ಕಾಲಘಟ್ಟದಲ್ಲಿ ರಚಿತವಾದ ಸಾಹಿತ್ಯ ಕೃತಿಗಳನ್ನು ಪರಾಂಬರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಮಾಡ್ಯೂಲ್‍ನಲ್ಲಿ (ಸಂಚಿಯಲ್ಲಿ) ಕನ್ನಡ ಭಾಷೆಯ ಅವಸ್ಥಾಂತರಗಳು ಮತ್ತು ಸಾಹಿತ್ಯ ಚರಿತ್ರೆಯ ವಿಭಾಗಕ್ರಮಗಳನ್ನು ಕುರಿತು ಚರ್ಚಿಸಲಾಗಿದೆ. ಮಗುವಿನ ಕಲಿಕೆಯ ಸಂದರ್ಭವನ್ನು ಅನುಲಕ್ಷಿಸಿ ಪ್ರಾಚೀನ ಸಾಹಿತ್ಯದ ಕಲಿಕೆಯ ಅನುಕೂಲಿಸುವಿಕೆಯನ್ನು ಸರಳೀಕರಿಸಿದೆ. ಕಲಿಕೆಯ ಪ್ರಕ್ರಿಯೆಯಲ್ಲಿ ಭಾಷಾಂಶಗಳು, ವ್ಯಾಕರಣಾಂಶಗಳು ಮತ್ತು ಛಂದಸ್ಸಿನ ಅಂಶಗಳ ಚರ್ಚೆಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಮಕ್ಕಳಲ್ಲಿ ಹುದುಗಿರುವ ಭಾಷಾ ಸಾಮಥ್ರ್ಯಗಳು, ಆಲೋಚನಾ ಶಕ್ತಿ, ಸೃಜನಶೀಲತೆ, ಸೌಂದರ್ಯ ಪ್ರಜ್ಞೆ, ರಸಾಸ್ವಾದನೆ, ಸಂವೇದನಾಶೀಲತೆ, ಕಲ್ಪನಾಶಕ್ತಿ, ಮೌಲ್ಯಪ್ರಜ್ಞೆ ಮತ್ತು ಮೌಲ್ಯಜಿಜ್ಞಾಸೆ ಮೊದಲಾದ ಗುಣಾಂಶಗಳನ್ನು ಉದ್ದೀಪಿಸುವ ಆಶಯವನ್ನು ಈ ಸಂಚಿಯು ಹೊಂದಿದೆ. ಮಕ್ಕಳು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ಸಾಹಿತ್ಯ ಕೃತಿಗಳಲ್ಲಿ ಬಿಂಬಿತವಾಗಿರುವ ಮೌಲ್ಯಗಳನ್ನು ಅರ್ಥೈಸಿಕೊಳ್ಳುವುದು ಅನಿವಾರ್ಯ. ಅನುಕೂಲಕಾರರ ಅರಿವಿನ ವ್ಯಾಪ್ತಿಯನ್ನು ವಿಶಾಲಗೊಳಿಸುವ ಉದ್ದೇಶದಿಂದ ಹಳಗನ್ನಡ ಮತ್ತು ನಡುಗನ್ನಡ ಪಠ್ಯವನ್ನು ಕಲಿಯಬೇಕಾದರೆ ಅನುಸರಿಸಬಹುದಾದ ಮಾರ್ಗೋಪಾಯಗಳನ್ನು ಕುರಿತು ಪ್ರಾಯೋಗಿಕ ನೆಲೆಗಳನ್ನು ಈ ಮಾಡ್ಯೂಲ್ ಒಳಗೊಂಡಿದೆ. ಬಹಳ ಮುಖ್ಯವಾಗಿ ಮಕ್ಕಳು ಹಳಗನ್ನಡ ಮತ್ತು ನಡುಗನ್ನಡ ಪಠ್ಯಗಳನ್ನು ಸುಲಲಿತವಾಗಿ ಓದಿ ಅರ್ಥೈಸಿಕೊಳ್ಳುವ ನೆಲೆಗಳನ್ನು ವಿಸ್ತ್ರುತವಾಗಿ ಪರಿಚಯಿಸುವ ಪ್ರಯತ್ನ ಮಾಡಲಾಗಿದೆ. ಒಟ್ಟಾರೆ ಈ ಕೈಪಿಡಿಯಲ್ಲಿ ಪ್ರಾಥಮಿಕ ಶಿಕ್ಷಣದ ಸಂದರ್ಭದಲ್ಲಿ ಪ್ರಾಚೀನ ಸಾಹಿತ್ಯ ಪಠ್ಯಗಳ ಪರಿಮಾಣಾತ್ಮಕ ದೃಷ್ಟಿಗಿಂತ ಗುಣಾತ್ಮಕವಾಗಿ ತರಗತಿಗಳಲ್ಲಿ ಅನುಕೂಲಿಸುವ ಪ್ರಕ್ರಿಯೆ ಮತ್ತು ಸ್ವರೂಪಗಳನ್ನು ಚರ್ಚಿಸಲಾಗಿದೆ. DOWNLOAD


thumbnail

> View Next: ಹಿಂದಿ